ಭಾಭಾ, ಹೋಮಿ ಜಹಾಂಗೀರ್
1909-66 ಭಾರತದ ನ್ಯೂಕ್ಲಿಯರ್ ಭೌತವಿಜ್ಞಾನಿ. ಜನನ ಮಹಾರಾಷ್ಟ್ರ ರಾಜ್ಯದ ಮುಂಬೈನಲ್ಲಿ (3 ಅಕ್ಟೋಬರ್ 1909). ಇವರ ವಿದ್ಯಾಭ್ಯಾಸ ಮುಂಬೈ ಕೆಥೀಡ್ರಲ್ ಮತ್ತು ಜಾನ್ ಕ್ಯಾನನ್ ಶಾಲೆಗಳಲ್ಲೂ ಅನಂತರ ಎಲ್‍ಫಿನ್‍ಸ್ಟನ್ ಕಾಲೇಜಿನಲ್ಲೂ ನಡೆಯಿತು. ಉಚ್ಚ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ತೆರಳಿ (1927) ಕೇಂಬ್ರಿಜ್ ವಿಶ್ವವಿದ್ಯಾಲಯದ ಬಿ.ಎ. ಪದವಿ ಪಡೆದರು. (1930). ಮುಂದೆ ಲಂಡನ್ನಿನ ರಾಯಲ್ ಇನ್‍ಸ್ಟಿಟ್ಯೂಟಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಇವರಿಗಿದ್ದ ಆಸಕ್ತಿಯಿಂದಾಗಿ ಅದರಲ್ಲಿ ವಿಶೇಷಾಭ್ಯಾಸ ನಡೆಸಿ ಪದವಿ ಗಳಿಸಿದರು. ಮುಂದೆ ಸೈದ್ಧಾಂತಿಕ ಭೌತವಿಜ್ಞಾನವನ್ನು ವಿಶೇಷ ಅಧ್ಯಯನ ಹಾಗೂ ಸಂಶೋಧನೆಯ ವಿಷಯವಾಗಿ ಆಯ್ಕೆಮಾಡಿಕೊಂಡರು. ಇವರ ಸಂಶೋಧನೆ ಕೇಂಬ್ರಿಜ್ಜಿನ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ನಡೆಯಿತು. ಈ ಸಮಯದಲ್ಲಿ ಇವರಿಗೆ ಗಣಿತವಿಭಾಗದಲ್ಲಿಯ ರೌಸ್‍ಬಾಲ್ ಪರ್ಯಟನವೇತನ ಹಾಗೂ ಐಸಾಕ್ ನ್ಯೂಟನ್ ವಿದ್ಯಾರ್ಥಿ ವೇತನಗಳು ದೊರೆತವು. ಇದರಿಂದ ಇವರಿಗೆ ಯೂರೊಪಿನ ಪ್ರಮುಖ ವಿಜ್ಞಾನ ಕೇಂದ್ರಗಳಿಗೆ ಭೇಟಿ ನೀಡುವ ಅವಕಾಶ ಒದಗಿತು. ವಿದೇಶಯಾತ್ರೆಯ ವೇಳೆ ಇವರಿಗೆ ಭೌತವಿಜ್ಞಾನ ಕ್ಷೇತ್ರದ ದಿಗ್ಗಜಗಳೆನಿಸಿದ ಪೌಲಿ, ಫರ್ಮಿ ಡಿರಾಕ್ ಮೊದಲಾದವರೊಡನೆ ಸಂಪರ್ಕವೂ ಕ್ಯಾವೆಂಡಿಷ್ ಪ್ರಯೋಗಾಲಯದ ಕಾಕ್‍ಕ್ರಾಫ್ಟ್, ಬ್ಲ್ಯಾಕೆಟ್ ಮೊದಲಾದವರ ನಿಕಟ ಪರಿಚಯವೂ ಆದುವು. ಭೌತವಿಜ್ಞಾನದಲ್ಲಿಯ ಇವರ ಮಹತ್ತ್ವದ ಸಂಶೋಧನೆಯ ಸಲುವಾಗಿ ಇವರಿಗೆ ಕೇಂಬ್ರಿಜ್ ವಿಶ್ವವಿದ್ಯಾಲಯ ಡಾಕ್ಟೊರೇಟ್ ಪದವಿ ನೀಡಿತು. (1934).

ವಿಶ್ವಕಿರಣಗಳನ್ನು ಕುರಿತಂತೆ ಭಾಭಾ ನಡೆಸಿದ ಸಂಶೋಧನೆಗಳು ಇವರಿಗೆ ಪ್ರಪಂಚಖ್ಯಾತಿ ಒದಗಿಸಿದುವು. ದ್ವಿತೀಯಕ ವಿಶ್ವ ಕಿರಣಗಳಲ್ಲಿರುವ (ಸೆಕೆಂಡರಿ ಕಾಸ್ಮಿಕರೇಸ್) ಅಭೇದಕ (ನಾನ್‍ಪೆನೆಟ್ರೇಂಟಿಗ್)  ಅಥವಾ ಮೃದು (ಸಾಫ್ಟ್) ಘಟಕಗಳ ಜನನ ಕುರಿತಂತೆ ಇವರು ನಿರ್ಝರ ಸಿದ್ಧಾಂತವನ್ನು (ಕ್ಯಾಸ್‍ಕೇಡ್ ತಿಯರಿ) ಮುಂದಿಟ್ಟರು. ನಿರ್ಝರ ಸಿದ್ಧಾಂತದ ರೀತ್ಯ ಹೇಳುವುದಾದರೆ ತದ್ವಿರುದ್ಧವಾಗಿ ಪೀಳಿಗೆಗಳು ಪರ್ಯಾಯಿಸುತ್ತವೆ. ಅಂದರೆ ಉತ್ತರೋತ್ತರ ಪೀಳಿಗೆಗಳೆರಡರ ಸದಸ್ಯಗಳು ಒಂದೇ ಬಗೆಯವಾಗಿರುವುದಿಲ.್ಲ ಬದಲು, ವಿಭಿನ್ನ ಪ್ರಭೇದಗಳಿಗೆ ಸೇರಿದವಾಗಿರುವಂತೆ ಭಾಸವಾಗುತ್ತವೆ. ಇವೆರಡು ಪ್ರಭೇದಗಳ ಪೈಕಿ ಒಂದು ಅತಿಶಕ್ತಿಯುತ ಪ್ರೋಟಾನುಗಳು ಮತ್ತು ದೃಗ್ಗೋಚರ ಬೆಳಕಿನ ಕಿರಣಗಳಾದರೆ ಇನ್ನೊಂದು ಉಚ್ಚಜವ ಎಲೆಕ್ಟ್ರಾನುಗಳು ಮತ್ತು ಇವುಗಳ ಪ್ರತಿಕಣಗಳಾದ ಪಾಸಿಟ್ರಾನುಗಳು ನಿರ್ಝರ ಸಿದ್ಧಾಂತವನ್ನು ಕುರಿತಂತೆ ಹೈಟ್ರರ್ ಎಂಬರೊಡನೆ ಸಹವರ್ತಿಸಿ, ಕ್ವಾಂಟಮ್ ಸಿದ್ಧಾಂತದ ನೆರವಿನಿಂದ ಎರಡೂ ಕಣಗಳ ಸೃಷ್ಟಿಯ ಬಗ್ಗೆ ಅಧ್ಯಯನ ಮಾಡಿದರು. ಎಂದೇ ಈ ಸಿದ್ಧಾಂತವನ್ನು ಭಾಭಾ-ಹೈಟ್ಲರ್ ನಿರ್ಝರ ಸಿದ್ಧಾಂತ ಎಂದು ಕರೆಯುವುದೂ ಇದೆ. ಈ ಸಿದ್ಧಾಂತವನ್ನು ಕುರಿತ ಅಧ್ಯಯನ ಸಂಶೋಧನೆಗಳಲ್ಲಿ ಇವರಿಗೆ ಮತ್ತೊಬ್ಬ ಗಣಿತವಿದ ಅಲ್ಲಾಡಿ ರಾಮಕೃಷ್ಣನ್ ಎಂಬವರ ಸಹಯೋಗವೂ ದೊರಕಿತ್ತು.

ನಿರ್ಝರಸಿದ್ಧಾಂತದ ಪ್ರಾಯೋಗಿಕ ಪರೀಕ್ಷೆ, ಇದರ ಮೂಲರೂಪ ಹಾಗೂ ಪುನರ್ನಿರೂಪಿತ ರೂಪ ಎರಡರಲ್ಲೂ, ವಿಶ್ವಕಿರಣ ಭೌತ ವಿಜ್ಞಾನಿಗಳನ್ನು ಸ್ವಾಭಾವಿಕವಾಗೇ ಉದ್ದೀಪಿಸಿತು. ಇದಲ್ಲದೆ ಇದರಿಂದ ಎರಡು ಫಲಕಾರಿ ಪರಿಣಾಮಗಳು ಅಸ್ತಿತ್ವಕ್ಕೆ ಬಂದುವು. ಯಾದೃಚ್ಛಿಕ ಪ್ರಕ್ರಿಯೆಗಳು ಒಂದು. ಇವುಗಳ ಪೈಕಿ ಒಂದಾದ ವೃಷ್ಟಿವಿದ್ಯಮಾನವನ್ನು ಕುರಿತಂತೆ ಸಮಸ್ತ ವರ್ಗಕ್ಕೂ ಅನ್ವಯವಾಗುವ ತೆರದಲ್ಲಿ ಇದರ ಗಣಿತ ಹೂರಣವನ್ನು ಸಾರ್ವತ್ರೀಕರಿಸಲು ಇದು ಭಾಭಾರವರಿಗೆ ಸ್ಫೂರ್ತಿ ಒದಗಿಸಿತು. ಗಣಿತ ಕ್ಷೇತ್ರದೊಳಗೆ ಕಾಲಿಟ್ಟು ಒಂದು ನೆಲೆಗಳಿಸಲು ಕೃತಕವಾಗಿ ಸೃಷ್ಟಿಸಲಾದ (ಅಂದರೆ ಅನುಕರಿಸಲಾದ) ಯಾದೃಚ್ಛಿಕ ಪ್ರಕ್ರಿಯೆಗಳ ಮೂಲ ಲಕ್ಷಣಗಳನ್ನು ಅಗತ್ಯವಾದಷ್ಟು ಮಾತ್ರ ಅಮೂರ್ತೀಕರಿಸುವ ಆದರ್ಶೀಕೃತ ಪ್ರತಿರೂಪಗಳ ಇಲ್ಲವೆ ಕಾಲ್ಪನಿಕ ಕ್ರಿಯಾ ವಿನ್ಯಾಸಗಳ ಸಾರ್ವತ್ರೀಕೃತ ಗಣಿತ ಸಿದ್ಧಾಂತವನ್ನು ಭಾಭಾ ಅತಿ ವಿಸ್ಮಯಕರವೆನಿಸುವಷ್ಟು ನಿಷ್ಕøಷ್ಟ ರೀತಿಯಲ್ಲಿ ಅಭಿವರ್ಧಿಸಿದರು.

ನಿರ್ಝರ ಸಿದ್ಧಾಂತದ ಎರಡನೆಯ ಪರಿಣಾಮ ಇನ್ನೂ ಅಧಿಕ ಗಮನಾರ್ಹವಾಗಿತ್ತು. ಎಲೆಕ್ಟ್ರಾನುಗಳು ವಸ್ತು ಮಾಧ್ಯಮಗಳ ಮೂಲಕ ವೃಷ್ಟಿ ಉತ್ಪಾದಿಸದೆ ಸಾಗುವುದಿಲ್ಲ ಎಂಬುದು ಸಾಧಿತವಾಗಿದ್ದುದರಿಂದ ವಿಶ್ವಕಿರಣಗಳಲ್ಲಿ ಕಂಡುಬಂದ, ಆದರೆ ಪ್ರೋಟಾನುಗಳಂತಾಗಲಿ ಎಲೆಕ್ಟ್ರಾನುಗಳಂತಾಗಲಿ ವರ್ತಿಸದ, ಕೆಲವು ಕಣಗಳು ಹೊಸಬಗೆಯ ನ್ಯೂಕ್ಲಿಯರ್ ಕಣಗಳಾಗಿರಬೇಕು ಎಂದು ಭಾಭಾ ಮುನ್ನುಡಿದರು. ಈ ಕಣಗಳನ್ನು ಬೇರೆ ಬೇರೆ ಹೆಸರುಗಳಿಂದ ಕರೆದಿದ್ದರೂ ಭಾಭಾ ಅವರೇ ಸೂಚಿಸಿದ ಮೇಸಾನ್ ಎಂಬ ಹೆಸರನ್ನು ಒಪ್ಪಲಾಯಿತು. ತರುವಾಯದ ದಿನಗಳ ನ್ಯೂಕ್ಲಿಯರ್ ಸಂಶೋಧನೆಗಳಲ್ಲಿ ಮೇಸಾನುಗಳ ಅಧ್ಯಯನ ವಿಶೇಷ ಪಾತ್ರ ವಹಿಸಿದೆ. ಮೇಸಾನುಗಳಲ್ಲಿ ವಿಸ್ತøತ ವೈವಿಧ್ಯ ಇರುವುದನ್ನು ಈ ಅಧ್ಯಯನಗಳು ವ್ಯಕ್ತಪಡಿಸಿವೆ. ಆದರೆ ಸಂತತಿ ವೃದ್ಧಿಯ ಈ ಆವಿಷ್ಕಾರವಾಗುವುದಕ್ಕೆ ಮೊದಲೇ, 1938ರಷ್ಟು ಹಿಂದೆಯೇ ಭಾಭಾ ಮೇಸಾನಿನ ಸದಿಶ ಸಿದ್ಧಾಂತ ರೂಪಿಸಿ ರಾಯಲ್ ಸೊಸೈಟಿಯಲ್ಲಿ ಒಂದು ಪ್ರಬಂಧವಾಗಿ ಮಂಡಿಸಿದ್ದರು. ಭಾಭಾರವರ ಸಂಶೋಧನೆಯನ್ನು ಗುರುತಿಸಿದ ಲಂಡನ್ನಿನ ರಾಯಲ್ ಸೊಸೈಟಿ ಇವರಿಗೆ ಫೆಲೊ ಗೌರವ ನೀಡಿತು. (1941). ಈ ಪ್ರಬಂಧವನ್ನು ರಾಯಲ್ ಸೊಸೈಟಿ 1950ರಲ್ಲಿ ಪ್ರಕಟಿಸಿತು.
ಭಾಭಾ ರಜೆಗೆಂದು 1939ರಲ್ಲಿ ಭಾರತಕ್ಕೆ ಹಿಂತಿರುಗಿದ್ದರು. ಆಗ ತಲೆದೋರಿದ್ದ ಎರಡನೆಯ ಮಹಾಯುದ್ಧದ ಪರಿಸ್ಥಿತಿಯಿಂದಾಗಿ ಇವರು ಯೂರೊಪಿಗೆ ಹಿಂತಿರುಗಲಾಗಲಿಲ್ಲ. ಇವರು ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ (ತಾತಾ ವಿಜ್ಞಾನ ಮಂದಿರ) ಸೈದ್ಧಾಂತಿಕ ಭೌತವಿಜ್ಞಾನ ವಿಭಾಗದ ರೀಡರ್ ಆಗಿ ಸೇವೆ ಸಲ್ಲಿಸಿದರು. (1942-45). ಇಲ್ಲಿಯೂ ವಿಶ್ವಕಿರಣಗಳನ್ನು ಕುರಿತ ಸಂಶೋಧನ ಮುಂದುವರಿಸಿದರು. ವಿಜ್ಞಾನಕ್ಷೇತ್ರದಲ್ಲಿ ಮೂಲಕಣಗಳ ಅಧ್ಯಯನಕ್ಕೆ ಪ್ರತ್ಯೇಕ ಸಂಸ್ಥೆಯ ಅಗತ್ಯವನ್ನು ಮನಗಂಡಿದ್ದ ಭಾಭಾ ಮುಂಬೈ ತಾತಾ ಮೂಲಭೂತ ಸಂಶೋಧನಾಲಯವನ್ನು ಪ್ರಾರಂಭಿಸಿ ಅಲ್ಲಿಯ ವಿಶ್ವಕಿರಣ ಸಂಶೋಧನ ಘಟಕದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. (1942-45). ಭಾರತದಲ್ಲಿ ಪರಮಾಣು ಶಕ್ತಿಯನ್ನು ಕುರಿತ ಅಧ್ಯಯನ ಸಂಶೋಧನೆಗಳ ಸಲುವಾಗಿ ಪರಮಾಣುಶಕ್ತಿ ಆಯೋಗವೊಂದು ಸ್ಥಾಪನೆಯಾಗಿತ್ತು. ಭಾಭಾ  ಈ ಆಯೋಗದ ಅಧ್ಯಕ್ಷರಾಗಿದ್ದರು. (1947-66). ಮುಂಬೈ ಉಪನಗರ ಟ್ರಾಂಬೆಯಲ್ಲಿ ಅಟಾಮಿಕ್ ಎನರ್ಜಿ ಎಸ್ಟಾಬ್ಲಿಷ್‍ಮೆಂಟ್ ಎಂಬ ಸಂಸ್ಥೆ ಅಸ್ತಿತ್ವಕ್ಕೆ ಬಂತು (1948). ಅದರ ಹುಟ್ಟು ಮತ್ತು ಬೆಳವಣಿಗೆಗಳಲ್ಲಿ ಭಾಭಾ ವಿಶೇಷ ಆಸಕ್ತಿವಹಿಸಿದ್ದರು. ಈ ಸಂಸ್ಥೆಯಲ್ಲಿ ಸ್ಥಾಪಿತವಾಗಿರುವ ಅಪ್ಸರಾ, ಸೈರಸ್ ಮತ್ತು ಜರ್ಲಿನಾ ಎಂಬ ಹೆಸರಿನ ನ್ಯೂಕ್ಲಿಯರ್ ರಿಯಾಕ್ಟರುಗಳು, ತತ್ಸಂಬಂಧಿ ಎಲೆಕ್ಟ್ರಾನಿಕ್ ಉಪಕರಣಗಳು, ಈ ಉಪಕರಣಗಳನ್ನು ತಯಾರಿಸುವ ಹೈದರಾಬಾದಿನಲ್ಲಿಯ ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ ಎಂಬ ಸಂಸ್ಥೆ, ತೋರಿಯಮ್ ಪ್ಲೂಟೋನಿಯಮ್ ಮುಂತಾದ ವಿಕಿರಣಪಟು ವಸ್ತುಗಳನ್ನು ತಯಾರುಮಾಡುವ ಸಂಸ್ಥೆಗಳು-ಈ ಮೊದಲಾದವುಗಳ ಬಗ್ಗೆ ಭಾಭಾ ಆಸ್ಥೆ ಆಸಕ್ತಿ ಹೊಂದಿದ್ದರ ಸಲುವಾಗಿ ಮುಂಬೈಯ ಅಟಾಮಿಕ್ ಎನರ್ಜಿ ಎಸ್ಟಾಬ್ಲಿಷ್‍ಮೆಂಟ್ ಈಗ ಬೃಹದ್ ಸಂಸ್ಥೆಯಾಗಿ ಬೆಳೆದಿದೆ. ಪ್ರತಿಭಾವಂತ ಯುವಕ ವಿಜ್ಞಾನಿಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡುವಲ್ಲೂ ಭಾಭಾ ವಿಶೇಷ ಆಸಕ್ತಿ ತೋರಿದ್ದರು. ಈ ಸಂಸ್ಥೆಯ ವಿಶ್ವಕಿರಣಸಂಶೋಧನಾ ವಿಭಾಗ ಈಗ ಬಲು ವಿಸ್ತರಿಸಿದೆ. ಟ್ರಾಂಬೆ ಕೇಂದ್ರದ ಬಗ್ಗೆ ಮಾತ್ರ ಅಲ್ಲದೆ ದಕ್ಷಿಣಭಾರತದ ತುಂಬಾ ರಾಕೆಟ್ ಉಡಾವಣಾ ಠಾಣ್ಯ, ಕಾಶ್ಮೀರದ ಗುಲ್ಮಾರ್ಗ್‍ನಲ್ಲಿಯ ಉನ್ನತಪ್ರದೇಶ ವಿಷಯಕ್ಕೆ ಸಂಶೋಧನ ಕೇಂದ್ರ ಮುಂತಾದವುಗಳ ಬೆಳವಣಿಗೆಗೆ ಭಾಭಾ ಬಹಳಷ್ಟು ಶ್ರಮಿಸಿದರು. ಭಾರತ ಸರ್ಕಾರದ ಪರಮಾಣು ಶಕ್ತಿ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. (1954-66). ಬೆಂಗಳೂರಿನಲ್ಲಿ ನಡೆದ (1951) ಭಾರತೀಯ ವಿಜ್ಞಾನ ಕಾಂಗ್ರೆಸ್, ಪರಮಾಣು ಶಕ್ತಿಯ ಶಾಂತಿಯುತ ಉಪಯೋಗಗಳ ಬಗ್ಗೆ ಅಂತಾರಾಷ್ಟ್ರೀಯ ಅಧಿವೇಶನದ (1955) ಅಧ್ಯಕ್ಷರಾಗಿದ್ದರು. ಅಂತಾರಾಷ್ಟ್ರೀಯ ಪರಮಾಣುಶಕ್ತಿ ಆಯೋಗದ ವೈಜ್ಞಾನಿಕ ಸಲಹಾಸಮಿತಿಯ ಸದಸ್ಯರಾಗಿಯೂ ಇದ್ದರು. ಇವರು ರಚಿಸಿರುವ ಗ್ರಂಥಗಳ ಪೈಕಿ ಕ್ವಾಂಟಮ್ ತಿಯರಿ, ಎಲಿಮೆಂಟರಿ, ಫಿಜಿಕಲ್ ಪಾರ್ಟಿಕಲ್ಸ್, ಕಾಸ್ಮಿಕ್ ರೇಡಿಯೇಷನ್ ಇವು ಮುಖ್ಯವಾಗಿವೆ.

ಭಾಭಾ ಅವರಿಗೆ ಸಂದ ಗೌರವಗಳು ಪ್ರಶಸ್ತಿಗಳು ಅನೇಕ, ಲಂಡನ್ನಿನ ರಾಯಲ್ ಸೊಸೈಟಿಯ ಫೆಲೊ ಗೌರವ ಲಭಿಸಿದ್ದಲ್ಲದೆ ಎಡಿನ್‍ಬರೋ ರಾಯಲ್ ಸೊಸ್ಶೆಟಿಯ ಗೌರವ ಫೆಲೋ ಮರ್ಯಾದೆಯೂ (1957) ಲಭಿಸಿತು. ಇವರಿಗೆ ಸಂದ ಬಹುಮಾನ, ಪ್ರಶಸ್ತಿಗಳ ಪೈಕಿ ಆಡಮ್ಸ್ ಬಹುಮಾನ (1942), ಹಾಪ್ಕಿನ್ಸ್ ಬಹುಮಾನ (1948). ಪದ್ಮಭೂಷಣ ಪ್ರಶಸ್ತಿ (1954) ಮುಖ್ಯವಾದವು. ಇವರಿಗೆ ಭಾರತ ಹಾಗೂ ವಿದೇಶಗಳಲ್ಲಿಯ ಹಲವಾರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟೊರೇಟ್ ನೀಡಿವೆ.
ವಿಜ್ಞಾನಸಂಶೋಧನೆಗಳನ್ನು ನಡೆಸುವ ಉದ್ದೇಶವಿಟ್ಟುಕೊಂಡು ಸ್ಥಾಪಿತವಾದ ಹಲವಾರು ವಿಜ್ಞಾನಸಂಸ್ಥೆಗಳಿಗೆ ಪರಮಾಣುಶಕ್ತಿ ಇಲಾಖೆಯಿಂದ ಆರ್ಥಿಕನೆರವು ಒದಗಿಸಲು ಭಾಭಾ ಪ್ರಯತ್ನಿಸಿ ಸಫಲರಾಗಿದ್ದರು. ಇವರ ದೂರದರ್ಶಿತ್ವ, ಅಸಾಧಾರಣ ಸಾಮಥ್ರ್ಯಗಳಿಂದ ಭಾರತ ವಿಜ್ಞಾನಕ್ಷೇತ್ರದಲ್ಲಿ ಅದ್ಭುತಪ್ರಗತಿ ಸಾಧಿಸುವುದು ಸಾಧ್ಯವಾಯಿತು. ಚಿತ್ರಕಲೆಯಲ್ಲೂ ಇವರು ಸಿದ್ಧಹಸ್ತರು. ಸಂಗೀತ, ಶಿಲ್ಪಕಲೆ ಮುಂತಾದ ಕ್ಷೇತ್ರಗಳಲ್ಲೂ ಅಭಿರುಚಿ ಇತ್ತು.

ವಿಮಾನಯಾನ ಮಾಡುವಾಗ ಯೂರೋಪಿನಲ್ಲಿಯ ಮಾಂಟ್‍ಬ್ಲಾಂಕ್ ಬಳಿ ವಿಮಾನ ಅಪಘಾತಕ್ಕೀಡಾಗಿ ಇವರು ಮಡಿದರು (24 ಜನವರಿ 1966). ಇವರ ಸ್ಮರಣಾರ್ಥ ಟ್ರಾಂಬೆಯ ಸಂಸ್ಥೆಯ ಹೆಸರನ್ನು ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ ಎಂದು ಬದಲಾಸಲಾಯಿತು (1968).
(ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ